ವಿಶ್ವನಾಥ
ವಿಶ್ವನಾಥ	ಸು. 14ನೆಯ ಶತಮಾನ. ಸುಪ್ರಸಿದ್ಧ ಆಲಂಕಾರಿಕ. ಸಾಹಿತ್ಯದರ್ಪಣ ಎಂಬ ಲಾಕ್ಷಣಿಕ ಗ್ರಂಥವನ್ನು ಬರೆದಿದ್ದಾನೆ. ಈತ ನಾರಾಯಣದಾಸನ ಪೌತ್ರನೆಂದೂ ಚಂದ್ರಶೇಖರನ ಪುತ್ರನೆಂದೂ ಒರಿಸ್ಸ ಪ್ರಾಂತದ ನಿವಾಸಿಯೂ ಕಳಿಂಗರಾಜನರಸಿಂಹದೇವನ ಆಸ್ಥಾನದಲ್ಲಿ ಇವನೂ ಇವನ ತಂದೆಯೂ ಉನ್ನತಅಧಿಕಾರದಲ್ಲಿದ್ದರೆಂದೂ ಇವನ ಕೃತಿಗಳಿಂದ ತಿಳಿದುಬರುತ್ತದೆ. ರಾಘವವಿಲಾಸ, ಕುವಲಯಾಶ್ವಚರಿತ (ಪ್ರಾಕೃತ), ಪ್ರಭಾವತೀ ಚಂದ್ರಕಲಾ, ಪ್ರಶಸ್ತಿರತ್ನಾವಲೀ, ನರಸಿಂಹವಿಜಯ, ಕಾವ್ಯ ಪ್ರಕಾಶದರ್ಪಣ-ಇವನ ಇತರ ಕೃತಿಗಳು.

	ಜಮ್ಮು ಪ್ರಾಂತದಲ್ಲಿ ದೊರೆತ ಸಾಹಿತ್ಯ ದರ್ಪಣದ ಪ್ರತಿಯಲ್ಲಿ 1440 ವಿಕ್ರಮ ಶಕೆಯೆಂದು ಬರೆದಿದೆ. “ಸಂಧೌ ಸರ್ವಸ್ವಹರಣಿಂ ವಿಗ್ರಹೇ ಪ್ರಾಣನಿಗ್ರಹಃ ಅಲಾವದೀನ ನೃಪತೌ ನಸಂಧಿರ್ನಚ ವಿಗ್ರಹಃ” ಎಂಬ ಪದ್ಯವನ್ನು ಈತ ಉದಾಹರಿಸಿದ್ದಾನೆ. ಆದ್ದರಿಂದ ಸಾಹಿತ್ಯದರ್ಪಣವನ್ನು 1300-84ರ ಮಧ್ಯದಲ್ಲಿ ರಚಿಸಿರಬಹುದು. ಇದರಲ್ಲಿ 10 ಪರಿಚ್ಛೇದಗಳಿವೆ: ಕಾವ್ಯಲಕ್ಷಣ, ಪದವಾಕ್ಯವಿಚಾರ, ರಸ-ಭಾವ, ಕಾವ್ಯಭಾಗ-ಧ್ವನಿ, ಗುಣೀಭೂತವ್ಯಂಗ್ಯ, ವ್ಯಂಜನಾವೃತ್ತಿ, ನಾಟ್ಯಲಕ್ಷಣ ವಿಚಾರ, ದೋಷ, ಗುಣ, ರೀತಿಗಳು, ಶಬ್ದಾರ್ಥಾಲಂ ಕಾರಗಳು-ಹೀಗೆ ಅಲಂಕಾರ ಶಾಸ್ತ್ರದ ಸರ್ವ ವಿಷಯಗಳನ್ನು ವಿವೇಚಿಸಿರುವ ಈ ಗ್ರಂಥದ ವಿಶೇಷತೆಯೆಂದರೆ ಎಷ್ಟೋ ಆಲಂಕಾರಿಕರು ನಿರೂಪಿಸದ ನಾಟ್ಯಶಾಸ್ತ್ರದ ವಿಚಾರವನ್ನೂ ಪ್ರಸ್ತಾಪಿಸಿರುವುದು. * (ಎ.ಎಲ್.ಎಚ್.)

   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ